Sunday 20 December 2009

ambe (nataka)

ಅಂಬೆ ನಾಟಕದ ಮೊದಲ ದೃಶ್ಯ
ಕಿನ್ನರ: ( ಆಂತ್ಯವಿಲ್ಲದ ಅವಕಾಶದಲ್ಲಿ ಹಾರಾಡುತ್ತಾ ) (ಸ್ವಗತ) ಎಲ್ಲಿ ಹೋದಳು ನನ್ನ ರನ್ನಗಿನ್ನರಿ ? ಎಲ್ಲಿ ಹುಡುಕಲಿ ಅವಳನ್ನು ? ಹೋಗಲಿ ಹುಡುಕಿದರೆ ಸಿಕ್ಕುತ್ತಾಳೆಯೇ? ಅವಳೇ ಬ ರಬೇಕು , ಬಂದೆದುರು ನಿಲ್ಲಬೇಕು . ಅಲ್ಲಿಯವರೆಗೆ ಕಾಯಬೇಕು ( ಆಕಾಶದಲ್ಲಿ ಸಂಗೀತದ ಅಲೆಗಳು ) ಹೋ ಶುಭ ಸೂಚನೆ ಬರುತ್ತಿರುವಳು ನನ್ನ ಮನೋ ಮಯೂರಿ ( ಆಕಾಶದಲ್ಲಿ ಕಿನ್ನರಿಯ ಆಕೃತಿ ಒಡಮೂಡಿ ನಿಲ್ಲುವುದು ) ಬಂದೆಯಾ ನನ್ನ ಮನ ಮೋಹಿನಿ ನಿನ್ನನ್ನೇ ನೆನಪಿಸಿಕೊಳ್ಳುತ್ತಿದ್ದೆ

ಕಿನ್ನರಿ : ಮಾರಾಯ ನಿನ್ನ ಗೊಣಗಾಟ ಸಹಿಸಲಸದಳವಾಯಿತು ಇನ್ನೇನು ಮಾಡಲಿ ಬರಲೇಬೇಕಾಯಿತು . ಯಾಕಿಷ್ಟು ಕಾತರದಿಂದ ನನಗಾಗಿ ಕಳವಳಿಸುತ್ತಿದ್ದೆ ಏನು ನಿನ್ನ ಸಂತಾಪ ?

ಕಿನ್ನರ : ಸಂತಾಪವಲ್ಲದೆ ಇನ್ನೇನು ಮಹರಾಯಿತಿ , ಈ ಶೂನ್ಯದಲ್ಲಿ ನೀನೂ ಇಲ್ಲದೆ ಹೋದರೆ ನಾನೂ ಶೂನ್ಯವಾಗಿ ಹೋಗುತ್ತೇನೆ . ಎಲ್ಲವೂ ಶೂನ್ಯವಾದರೆ ಆ ಬಯಲಿಗೆ ಕೆಲಸವಾದರೂ ಏನು ? ಇಲ್ಲಿ ನಾಟಕ ಜರುಗುವುದು ಹೇಗೆ ? ರಂಗವೂ ಪರದೆಗಳೂ ಪರಿಕರಗಳೂ ವರ್ಣಗಳೂ ಏನೂ ಇಲ್ಲದ್ದನ್ನು ನಾನು ಕಲ್ಪಿಸಿಕೊಳ್ಳಲಾರೆ .

ಕಿನ್ನರಿ : ಏನು ನಿನ್ನ ನಾಟಕದ ಗೋಳು, ಅದು ಹೇಳು

ಕಿನ್ನರ : ಇವತ್ತು ಒಂದು ನಾಟಕ ಆಡಲು ತೀರ್ಮಾನಿಸಿದ್ದೇನೆ

ಕಿನ್ನರಿ : ನಾಟಕ ! ಯಾವ ನಾಟಕ ? ಯಾವ ಕಾಲದಲ್ಲಿದ್ದೀಯ ನೀನು ? ನಾಟಕ ಅಂದರೆ ಏನು ? ಎಂದು ಜನ ಕೇಳುವ ಕಾಲದಲ್ಲಿ ನಾಟಕದ ಗೀಳು ನಿನಗೆ ಹೇಗೆ ಹತ್ತಿಕೊಂಡಿತು?

ಕಿನ್ನರ : ಜನಗಳಿಗಾಗಿ ಅಲ್ಲ ನನ್ನ ನಾಟಕ , ನನಗಾಗಿ , ನಿನಗಾಗಿ . ಅವರಾಗಿಯೇ ನೋಡಿಕೊಂಡರೆ ಯಾರಾದರೂ ನೋಡಿಕೊಳ್ಳಲಿ, ಯಾರೂ ನೋಡಿಕೊಳ್ಳದಿದ್ದರೂ ಆಡಿಕೊಳ್ಳುವ ಸಂತೋಷ ನಮಗಾದರೂ ಇದ್ದೇ ಇದೆಯಲ್ಲ . ನವಿಲಿನ ನಾಟ್ಯದಂತೆ , ನವಿಲಿಗೆ ಯಾರ ಹಂಗೇನು? ಅದರ ಪಾಡಿಗೆ ಅದು ಕುಣಿಯುತ್ತದೆ , ನೋಡುವವರು ನೋಡುತ್ತಾರೆ . ನೋಡದಿದ್ದರೆ ಇಲ್ಲ . ಕುಣಿಯುವುದು ಅದರ ಪ್ರವೃತ್ತಿ .

ಕಿನ್ನರಿ : ಏನು ಪ್ರವೃತ್ತಿ ಗಿವೃತ್ತಿ ಅಂತ ದೊಡ್ಡ ಮಾತುಗಳನ್ನು ಶುರು ಮಾಡಿದೆಯಲ್ಲ ಮಾರಾಯ , ನೀನು ನನಗಾಗಿ ಸುಭಗವಾಗಿ ಕಾಯುತ್ತಿರುವೆಯೆಂದು ಬಂದರೆ ಏನು ನಿನ್ನ ರಗಳೆ ಬರಿಯ ವೇದಾಂತದ ಗೋಳು, ನಿನಗೆ ಬೇರೆ ಮಾತಾಡಲು ಬರುವುದೇ ಇಲ್ಲವೆ ?

ಕಿನ್ನರ : ಓಹೋ ಆಗಲೇ ಸಿಡುಕಬೇಡ ಮಹರಾಯಿತಿ , ಹೆಣ್ಣುಗಳು ಮೂಗಿನ ಮೇಲೆಯೇ ಸಿಟ್ಟು ಕಟ್ಟಿಕೊಂಡು ಹುಟ್ಟಿರುವ ಜೀವಗಳು, ನಿಮಗೆ ಯಾವ ಮಾತು ಇಷ್ಟ ; ಯಾವುದು ಅಲ್ಲ ಎಂಬುದರ ಶೋಧನೆಯಲ್ಲಿಯೇ ಬಡ ಗಂಡಿನ ಜೀವಮಾನ ಮುಗಿದೇ ಹೋಯಿತು , ಕಡೆಗೂ ನಿಮ್ಮ ಇಷ್ಟಾನಿಷ್ಟಗಳು ನಿಲುಕಲೇ ಇಲ್ಲ ನಿಲುಕುವಂತೆ ಕಾಣುತ್ತಲೂ ಇಲ್ಲ .

ಕಿನ್ನರಿ : ನೋಡು ಆಗಲೇ ಮತ್ತೆ ಅರ್ಥವಾಗದ ಮಾತಿನ ಸಂತೆಯಲ್ಲಿ ಕಳೆದು ಹೋಗುತ್ತಿರುವೆ , ಪುಣ್ಯಾತ್ಮ ,ಗಂಡುಗಳಿಗೆ ಸಹಜವಾಗಿ ಮಾತನಾಡಲು ಬರುವುದೇ ಇಲ್ಲವೆ ? ನಿಮ್ಮ ಗೋಳು ಕೇಳುತ್ತಲೇ ನಮ್ಮ ಜೀವಮಾನಗಳು ಕಳೆದು ಹೋದವು , ಆದರೂ ನಿಮ್ಮ ಅಪಲಾಪ ಮಾತ್ರ ನಿಲ್ಲಲೇ ಇಲ್ಲ

ಕಿನ್ನರ : ಅಯ್ಯಮ್ಮ, ನೀನು ಕಾಣಲಿಲ್ಲವೆಂದು ಕಾತರಿಸುತ್ತ ಕುಳಿತಿದ್ದೆ , ಕಂಡ ಮೇಲೆ ನಿನ್ನನ್ನು ಸಂತವಿಸುವುದು ಹೇಗೆಂದು ಕಂಗೆಡುತ್ತಿದ್ದೇನೆ . ಸುಮ್ಮನೆ ಮಾತಾಡಿದರೆ ಜಳ್ಳುಮಾತುಗಳೆಂದು ಜರೆಯುತ್ತಾ ಕುಳಿತುಕೊಳ್ಳುವೆ , ಒಂದಿಷ್ಟು ಕಲಾತ್ಮಕವಾಗಿ ಮಾತಾಡಿದರೆ ವೇದಾಂತವೆಂದು ತಲೆ ತಿನ್ನುತ್ತೀಯ . ಏನು ಮಾಡಲಿ ಮಹರಾಯಿತಿ ? ಅದಕ್ಕೇ ಬಾ ನಾಟಕ ಆಡಿಬಿಡೋಣ ಯಾರಾದರೂ ಕೇಳಿಕೊಳ್ಳಲಿ .

ಕಿನ್ನರಿ : ಕೇಳಿಕೊಳ್ಳಲಿ ! ನಾಟಕವನ್ನು ನೋಡುತ್ತಾರೆ , ಬರಿಯ ಕೇಳುವುದಿಲ್ಲ .

ಕಿನ್ನರ : ಇದು ಆಡುವ ನಾಟಕವಲ್ಲ , ಓದುವ ನಾಟಕ .

ಕಿನ್ನರಿ : ಓದುವ ನಾಟಕ ! ಈ ಕಾಲದಲ್ಲಿ ಯಾರು ನಾಟಕ ಓದುತ್ತಾರೆ ಮರಾಯ , ನಾಟಕ ನೋಡುವುದು ಓದುವುದು ಎಲ್ಲ ಮುಗಿದೇ ಹೋಯಿತು . ಈಗೆಲ್ಲಾ ಬೇರೆ ಬೇರೆ ಬಣ್ಣದ ಕಾಲ .

ಕಿನ್ನರ : ನೋಡಿದೆಯಾ ಮತ್ತೆ ತಲೆ ತಿನ್ನಲು ಶುರು ಮಾಡಿದೆ , ಯಾಕೆ ಈ ಹಿಂದೆ ಯಾರೂ ನಾಟಕ ಬರೆದೇ ಇಲ್ಲವೆ ? ಅಭಿನಯಿಸಿಯೇ ಇಲ್ಲವೇ ? ನೋಡಿಯೇ ಇಲ್ಲವೆ ?

ಕಿನ್ನರಿ : ಓ ನನ್ನ ರನ್ನಗಿನ್ನರಾ , ಆ ಕಾಲ ಕಳೆದೇ ಹೋಯಿತು ಅಂತ ನಾನು ಹೇಳಿದ್ದು ,ಕಾಳಿದಾಸನಕಾಲ ಯಾವಾಗಲೋ ಮುಗಿದೇ ಹೋಯಿತು , ಭಾಸ ಗೀಸ ಎಲ್ಲ ಪಳೆಯುಳಿಕೆಗಳಾದರು . ಹೆಚ್ಚು ಹೇಳುವುದೇನು ಕಳೆದ ಶತಮಾನದ ಪ್ರಸಿದ್ದರೂ ಪುರಾಣಕಾಲಕ್ಕೆ ಸರಿದು ಹೋದರು . ಇನ್ನು ಈ ಶತಮಾನದಲ್ಲಿ ಯಾರಿಗಪ್ಪಾ ಬೇಕು ? ನಿನ್ನ ಪುರಾಣ ?

ಕಿನ್ನರ : ನನಗೆ ಬೇಕು, ನನ್ನ ಪ್ರೇಯಸಿಯಾದ ಕರ್ಮಕ್ಕೆ ನಿನಗೂ ಬೇಕು .

ಕಿನ್ನರಿ : ಏನು ಪುಣ್ಯಾತ್ಮ ನನ್ಯಾವಾಗ ನಿನ್ನ ಪ್ರೇಯಸಿ ? ಏನು ಬುಡಕ್ಕೇ ಕೈ ಹಾಕುತ್ತಿರುವೆ ? ಗಂಡಿನ ಮಯಾಜಾಲವನ್ನು ಹರಡಬೇಕೆಂದಿರುವೆಯಾ . ಅದೆಲ್ಲ ಕಳೆದ ಶತಮಾನದ ತಂತ್ರಗಳು , ಕಟ್ಟಿಡು ಅವನ್ನ

ಕಿನ್ನರ : ನಿನ್ನ ಹತ್ತಿರ ಹೇಗೆ ಮಾತಾಡುವುದು ಮಹರಾಯಿತಿ ? ಬರಿಯ ನೀನು ನಾನು ಎಂದರೆ ಅರಸಿಕ ಎನ್ನುತ್ತೀಯಾ , ಪ್ರಿಯ , ಪ್ರೇಯಸಿ ಎಂದರೆ ಕಳೆದ ಶತಮಾನದ ಮಾತು ಎನ್ನುತ್ತೀಯಾ ಮತ್ಯಾವ ನುಡಿಗಟ್ಟೂ ನನಗೆ ಹೊಳೆಯುತ್ತಿಲ್ಲ , ಅಥವಾ ನಿನ್ನ ಭಾವಲಹರಿಗೆ ಹೊಂದುವಂತಹ ಮಾತಾಡುವ ಕಲೆಯೇ ನನಗೆ ಕರಗತವಾಗಿಲ್ಲ ಕ್ಷಮಿಸು , ಸರಿ ಬಾ ಅದೇ ನಾಟಕ ಮಾಡೋಣ ಪುರಾಣ ಕಾಲದ ನಾಟಕ .

ಕಿನ್ನರಿ : ಯಾವ ಪುರಾಣ ? ಜನರನ್ನು ಸಾಮಾಜಿಕ ಸಮಸ್ಯೆಗಳೇ ತಲೆ ತಿನ್ನುತ್ತಿರುವಾಗ ಪುರಾಣದ ವ್ಯವಧಾನ ಯಾರಿಗಿದೆ ? ಅವರವರ ಪುರಾಣಗಳೇ ಹೈರಾಣಾಗುವಷ್ಟಿರುವಾಗ ಇನ್ನಾವ ಪುರಾಣ ಹಿಡಿಸೀತು ?

ಕಿನ್ನರ : ಇದೇ ಸರಿಯಾದ ಕಾಲ, ವರ್ತಮಾನದ ವಾಸ್ತವ ಕಂಗೆಡಿಸಿರುವಾಗ ಅದರಿಂದ ಮನಸ್ಸು ಹೊರಬರಲು ಸಹಕರಿಸುವುದೇ ಅಸಂಗತ ಸಂಗತಿಗಳು . ಏಕತಾನದ ಮರಳುಗಾಡಿನಲ್ಲಿ ಮನಸ್ಸು ಹೊಲಬುದಪ್ಪಿದಾಗ ವರ್ಣರಂಜಿತವಾದ ಅಕಾಲಿಕ ವರ್ಷಧಾರೆಯು ಧೈರ್ಯ ನೀಡಿ ಮುದಗೊಳಿಸಿ ಏಕತಾನತೆಯಿಂದ ಹೊರ ತರಬಲ್ಲದು .

ಕಿನ್ನರಿ : ನಿನ್ನ ವೇದಾಂತದ ಪರಿಭಾಷೆ ಒತ್ತಟ್ಟಿಗಿರಲಿ , ಯಾವ ನಾಟಕ ಅದನ್ನಾದರೂ ಸರಿಯಾಗಿ ಹೇಳು .

ಕಿನ್ನರ : ಪೂರ್ವ ಭಾರತ

ಕಿನ್ನರಿ : ಎಂಥದದು , ಪೂರ್ವ ಭಾರತ ? ನಾನು ವ್ಯಾಸ ಭಾರತವನ್ನು ಕೇಳಿದ್ದೆ . ಇದ್ಯಾವುದಿದು ? ಪೂರ್ವ ಭಾರತ ? ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಭಾರತಗಳು ಬೇರೆ ಇವೆಯೇ ?

ಕಿನ್ನರ : ಯಾಕಿಲ್ಲ ? ಮಧ್ಯ ಭಾರತವೂ ಇದೆ . ಹೆಣ್ಣೇ ಅದಲ್ಲ ನಾನು ಹೇಳಿದ್ದು . ಮಹಾಭಾರತದ ಪೂರ್ವ ಕಥೆಯನ್ನು . ಅದೇ ಪೂರ್ವ ಭಾರತ

ಕಿನ್ನರಿ : ಅದೇನು ಮಾತಿನ ಮಧ್ಯೆ ಹೆಣ್ಣೇ ಎಂಬ ವಿಶೇಷ ಸಂಬೋಧನೆ , ನಾನು ಹೆಣ್ಣು ಎಂಬುದನ್ನು ಚುಚ್ಚಿ ನೆನಪು ಮಾಡಬೇಕೇನು ?

ಕಿನ್ನರ : ಚುಚ್ಚುವುದೇನು ಮಹರಾಯಿತಿ , ಹೆಣ್ಣು ಗಂಡು ಎಂಬುವು ಪ್ರಕೃತಿಯ ಎರಡು ರೂಪಗಳು , ಇಲ್ಲಿ ಕಥೆ ಆರಂಭವಾಗುವುದೇ ಹೆಣ್ನು ಗಂಡಿನ ನಡುವಣ ಪ್ರೀತಿಯ ಕತೆಯ ವಿಷಾದಾಂತದಿಂದ . ಮುಂದಿನ ಮಹಾಭಾರತದ ವಿಷಾದಾಂತಕ್ಕೆ ಬರೆದ ಮುನ್ನುಡಿಯಂತೆ ಇಲ್ಲಿಯ ಕತೆಯ ಆರಂಭವೇ ವಿಷಾದಾಂತವಾಗಿ ಪರಿಣಮಿಸುತ್ತದೆ . ಅದೋ ನೋಡು ದೂರದಲ್ಲಿ ಕಾಣುತ್ತಿದೆ ಕಾಶಿ ನಗರ

Wednesday 15 April 2009